ಈರುಳ್ಳಿ-
ಆಲಿಯಂ ಜಾತಿಯ ಸೀಪಾ ಪ್ರಭೇದದ ಸಸ್ಯ (ಆನಿಯನ್). ಉಳ್ಳಾಗಡ್ಡೆಯೆಂದೂ ನೀರುಳ್ಳಿಯೆಂದೂ ಕರೆಯುವುದಿದೆ. ಸುಮಾರು 300 ಬಗೆಯ ಈರುಳ್ಳಿಗಳಿವೆಯೆಂದು ತಿಳಿದಿದೆ. ಇದು ಗೆಡ್ಡೆ ಆಕಾರದಲ್ಲಿ ಬೆಳೆದ ಬೆಳೆ. ಬೇರು ಕಾಂಡ ಎಲ್ಲವೂ ಒತ್ತೊತ್ತಿಗಿದೆ. ಸಾಮಾನ್ಯ ಈರುಳ್ಳಿಯ ಬೇರು ಪೊದೆಯಂತಿದೆ. ಉದ್ದ 4”-5”. ಈರುಳ್ಳಿ ಬೆಳೆಯುವಾಗ ಎರಡು ಬಗೆಯ ಬೇರುಗಳನ್ನು ಗಮನಿಸಬಹುದು. ಮೊದಲನೆಯವು ಬೀಜ ಮೊಳೆಯುವಾಗ ಕಾಣುವ ಬೇರುಗಳು. ಇವು ಗೆಡ್ಡೆಕಟ್ಟುವವರೆಗೆ ಜೀವಂತವಾಗಿದ್ದು ತರುವಾಯ ನಶಿಸಿಹೋಗುತ್ತವೆ. ಆ ವೇಳೆಗೆ ಎರಡನೆಯವು ಕಾಣಿಸಿಕೊಂಡಿರುವುವು. ಎಲೆಗಳ ನಿಬಿಡ ಒಕ್ಕೂಟವೇ ಗೆಡ್ಡೆ. ಇದು ಸಾಮಾನ್ಯವಾಗಿ ನೆಲದಡಿಯಲ್ಲಿರುವುದು. ಎಲೆಗಳು ದಪ್ಪವಾಗಿದ್ದು ನಿಬಿಡವಾಗಿ ಹೆಣೆದಂತೆ ಇರುವುವು. ಗೆಡ್ಡೆಯ ಹೊರಭಾಗದ ಪೊರೆ ತೆಳುವಾದ ಕಾಗದದಂತಿದ್ದು ಮಿಕ್ಕೆಲ್ಲ ಸಾರಯುಕ್ತ ಪೊದೆಗಳನ್ನು ಮುಚ್ಚಿ ರಕ್ಷಿಸುತ್ತದೆ. ಗೆಡ್ಡೆಯಂತೆ ಕಂಡರೂ ಈರುಳ್ಳಿ ವಾಸ್ತವಿಕವಾಗಿ ಒಂದು ಎಲೆ ತರಕಾರಿ.

ಈರುಳ್ಳಿಗೆಡ್ಡೆಯ ಕೆಳಗೆ ಒಂದು ಪೈಸಾ ಗಾತ್ರದ ಬಿಳುಪಾದ ಕಾಂಡವಿದೆ. ಇದರ ಸುತ್ತ ದಪ್ಪ ಎಲೆಗಳು ಚಿಗುರುತ್ತವೆ. ಪ್ರತಿಯೊಂದು ಎಲೆಯ ಕೆಳಭಾಗ ಕಾಂಡದೊಡನೆ ಸೇರಿದ್ದು ಸಾರಯುಕ್ತವಾಗಿದೆ. ಒಂದರ ಮೇಲೊಂದು ಪೇರಿಸಿದಂತೆ ಇವು ವೃದ್ಧಿಹೊಂದುತ್ತವೆ. ಕಾಂಡದ ಮಧ್ಯ ಪ್ರದೇಶದಲ್ಲಿ ವೃದ್ಧಿಹೊಂದದ ಎಲೆಗಳಿವೆ. ಇವನ್ನು ಭೂಮಿಯಲ್ಲಿ ನೆಟ್ಟಾಗ ಬೆಳೆದು ನಳಿಕೆಯಾಕಾರದಲ್ಲಿ ಹೊರಬಂದು ಛತ್ರಿಯಾಕಾರದ ಹೂ ಬಿಡುತ್ತವೆ.
ಮುಖ್ಯವಾದ ತರಕಾರಿಗಳಲ್ಲಿ ಈರುಳ್ಳಿ ಒಂದು. ಇದಕ್ಕೆ ವಾಣಿಜ್ಯಪ್ರಾಮುಖ್ಯವೂ ಇದೆ. ಇದರ ಉಪಯೋಗ ಅನಾದಿಕಾಲದಿಂದಲೂ ಪ್ರಚಲಿತವಿದೆ. ಈರುಳ್ಳಿ ಉತ್ತಮ ಆಹಾರ ಅಂಶಗಳಿಂದ ಕೂಡಿದ್ದು ರುಚಿಕರವಾದ ಮತ್ತು ಪುಷ್ಟಿಕರವಾದ ಆಹಾರವೆನಿಸಿದೆ. ಇದರಲ್ಲಿ ರಂಜಕದ ಅಂಶ ಹೆಚ್ಚಾಗಿದ್ದು ಸ್ವಲ್ಪಮಟ್ಟಿಗೆ ಸಿ ಜೀವಾತು ಇದೆ. ಅನೇಕ ಔಷಧಿಯ ಗುಣಗಳನ್ನು ಹೊಂದಿರುವುದರಿಂದ ವಿವಿಧ ಸ್ಥಳಗಳಲ್ಲಿ ಸ್ಥಾನೀಯ ಔಷಧಿಗಳಲ್ಲಿ ಉಪಯೋಗದಲ್ಲಿದೆ. ಇದು ಸುಲಭವಾಗಿ ಬೆಳೆದು ಹೆಚ್ಚಿನ ಕೀಟರೋಗಗಳಿಗೆ ಬಲಿಯಾಗದೆ ರುಚಿಯಾಗಿರುವ ಹೆಚ್ಚು ಕಾಲ ಕೆಡದೆ ಇರುವ ಕಡಿಮೆ ಬೆಲೆಯ ತರಕಾರಿಯಾಗಿರುವುದರಿಂದ ಜನಪ್ರಿಯವಾಗಿದೆ. ಇದರಲ್ಲಿ ಅಲೈಲ್ ಪ್ರೊಪೈಲ್ ಡೈಸಲ್ಫೈಡ್ ಎಂಬ ರಾಸಾಯನಿಕ ಮತ್ತು ಹೊಗೆಯಾಗುವ ಎಣ್ಣೆ (ವಾಲಟೈಲ್ ಆಯಿಲ್) ಇರುವುದರಿಂದ ಇದು ಖಾರವಾಗಿದೆ. ಈ ಎಣ್ಣೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಕೆಲವು ಈರುಳ್ಳಿಗಳಲ್ಲಿ ಖಾರ ಅಷ್ಟು ಇರುವುದಿಲ್ಲ. 100 ಗ್ರಾಂ ಈರುಳ್ಳಿ ಗೆಡ್ಡೆಯಲ್ಲಿ ಈ ಕೆಳಕಂಡ ಆಹಾರ ಅಂಶಗಳು ಇವೆ: ತೇವಾಂಶ 86.8: ಜೀವಾತುಗಳು 1.2; ಮೇದಸ್ಸು 0.1; ಪಿಷ್ಟ 11.6; ಲವಣಗಳು 0.4; ಸುಣ್ಣ-ಕ್ಯಾಲ್ಷಿಯಂ 0.18; ರಂಜಕ 0.05; ಶಕ್ತಿ 51 ಕೆಲೊರಿಗಳು; ಬಿ ಜೀವಾತು 120 ಅಂತರರಾಷ್ಟ್ರೀಯ ಏಕಮಾನಗಳು; ಸಿ ಜೀವಾತು 11 ಮಿಲಿಗ್ರಾಂ; ಸಿಕೊಟಿನಿಕ್ ಆಮ್ಲ 0.4; ರಿಬೊಫ್ಲೆವಿನ್ 10 ಮಿಲಿಗ್ರಾಂ.
ವ್ಯವಸಾಯ: ಭಾರತದ ಪ್ರಮುಖ ವ್ಯವಸಾಯಗಳಲ್ಲಿ ಈರುಳ್ಳಿ ಬೇಸಾಯವೂ ಒಂದು. ಹೆಚ್ಚು ಫಸಲೆತ್ತುವ ರಾಜ್ಯಗಳು ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ್ ಮತ್ತು ಅಸ್ಸಾಂ, ಮೈಸೂರು ರಾಜ್ಯದಲ್ಲಿ ಈರುಳ್ಳಿ ಬೇಸಾಯವಿದ್ದರೂ ಮೇಲೆ ಕಾಣಿಸಿರುವ ರಾಜ್ಯಗಳಿಗಿಂತಲೂ ಕಡಿಮೆ. ಭಾರತದೇಶ ಇತರ ದೇಶಗಳಿಗೆ ಈರುಳ್ಳಿಯನ್ನು ರಫ್ತು ಮಾಡುವುದರಿಂದ ವರ್ಷಕ್ಕೆ ಸುಮಾರು 32 ಲಕ್ಷ ರೂಪಾಯಿಗಳಷ್ಟು ವಿದೇಶೀ ವಿನಿಮಯವನ್ನು ಸಂಪಾದಿಸುತ್ತದೆ. ಜಪಾನ್, ಮಲಯ, ಬರ್ಮ, ಸಿಲೋನ್, ಇರಾನ್ ಮತ್ತು ಪೂರ್ವ ಆಫ್ರಿಕ ಮುಂತಾದ ರಾಷ್ಟ್ರಗಳಿಂದ ಭಾರತದ ಈರುಳ್ಳಿಗೆ ಬೇಡಿಕೆ ಇದೆ. ಚಿಕ್ಕಬಳ್ಳಾಪುರದ ಈರುಳ್ಳಿ ಹೆಚ್ಚಿಗೆ ಸಿಲೋನ್ ದೇಶಕ್ಕೆ ರಫ್ತಾಗುತ್ತದೆ. ಈರುಳ್ಳಿಯನ್ನು ವಿವಿಧ ಹವಾಗುಣಗಳಲ್ಲಿ ಬೆಳೆಸಬಹುದು. ಆದರೆ ಇದು ಅತಿಯಾದ ಉಷ್ಣ ಮತ್ತು ಶೀತವನ್ನು ಸಹಿಸುವುದಿಲ್ಲ; 150 — 250 ಸೆ. ಉಷ್ಣತೆ ಇರುವ ಪ್ರದೇಶದಲ್ಲಿ ಇದನ್ನು ಬೆಳೆಸಬಹುದು. 15-20 ಸೆ. ವರೆಗಿನ ಉಷ್ಣತೆ ಬೇಸಾಯಕ್ಕೆ ಸಮತೂಕವಾದದ್ದು. ಇದು ಉದ್ದ ಹಗಲಿನ ಬೆಳೆ. ಎಂದರೆ ಇದಕ್ಕೆ ಹಗಲಿನ ಉಷ್ಣತೆ ಬಲು ಅಗತ್ಯ. ವರ್ಷಕ್ಕೆ 35” ಮಳೆ ಬೀಳುವ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕೆಂಪುಮಣ್ಣಿನಲ್ಲಿ 25”-30” ಮಳೆ ಬೀಳುವ ಪ್ರದೇಶಗಳಲ್ಲಿ ಸುಲಭವಾಗಿ ಬೆಳೆಯಬಹುದು. ಅಧಿಕ ಮಳೆ ಬೀಳುವ ಪ್ರದೇಶದಲ್ಲಿ ಇದರ ಬೇಸಾಯ ಕಷ್ಟ. ಈರುಳ್ಳಿಯ ಬೇಸಾಯ ಸಮುದ್ರಮಟ್ಟದಿಂದ 5,000 ಎತ್ತರದವರೆಗೆ ವ್ಯಾಪಿಸಿದೆ. ಜೌಗಿಲ್ಲದ ಎಲ್ಲ ಮಣ್ಣುಗಳೂ ಈರುಳ್ಳಿ ಬೆಳೆಗೆ ಯೋಗ್ಯ. ಮಣ್ಣು ಸಡಿಲವಾಗಿದ್ದು ಗೆಡ್ಡೆ ದಪ್ಪವಾಗುವುದಕ್ಕೆ ಅವಕಾಶವಿರುವ ಫಲವತ್ತಾದ ಮಣ್ಣುಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಆದರೆ ಫಲವತ್ತಾದ ಮರಳುಗೋಡು, ಕೆಂಪು ಮರಳುಗೋಡು ಮತ್ತು ವಂಡು (ಸಿಲ್ಟ್) ಮಣ್ಣುಗಳು ಇನ್ನೂ ಉತ್ತಮ. 5.8 ರಿಂದ 7.8ರ ವರೆಗಿನ ಹುಳಿಕ್ಷಾರವುಳ್ಳ ಮಣ್ಣು ಸಹ ಯೋಗ್ಯವೆನಿಸಿದೆ. ಹೆಚ್ಚು ಹುಳಿ ಅಥವಾ ಹೆಚ್ಚು ಕ್ಷಾರತೆ (ಆಲ್ಕಲೈನ್) ಇರುವ ಮಣ್ಣುಗಳಲ್ಲಿ ಇದರ ಬೇಸಾಯ ಸಾಧ್ಯವಿಲ್ಲ. ಸ್ವಲ್ಪ ಹುಳಿ ಇರುವ ಭೂಮಿಯನ್ನು ಸುಣ್ಣ ಮತ್ತು ಮೈಲುತುತ್ತ ಹಾಕಿ ಹದಮಾಡಿ ಈರುಳ್ಳಿ ಬೆಳಸಬಹುದು.

ಬೆಳೆ: ಮೈಸೂರು ರಾಜ್ಯದಲ್ಲಿ ಈರುಳ್ಳಿಯನ್ನು ಎಲ್ಲ ಕಾಲಗಳಲ್ಲೂ ಬೆಳೆಯಬಹುದಾದರೂ ಮುಂಗಾರು ಬೆಳೆ (ಮೇ-ಸೆಪ್ಟೆಂಬರ್). ಹಿಂಗಾರು ಬೆಳೆ (ಅಕ್ಟೋಬರ್-ಫೆಬ್ರವರಿ) ಮುಖ್ಯವಾದವು. ರಾಜ್ಯದ ಉತ್ಪಾದನೆಯ 70% ಹಿಂಗಾರು ಬೆಳೆಯಿಂದ ಬರುತ್ತದೆ. ಉತ್ತರಭಾರತದಲ್ಲಿ ಹಿಂಗಾರು ಬೆಳೆ ಹೆಚ್ಚಿನ ಚಳಿಗೆ ಈಡಾಗುವುದರಿಂದ ಚೆನ್ನಾಗಿ ಬಾರದು. 
 ಈರುಳ್ಳಿಯನ್ನು ಪರ್ಯಾಯ ಬೆಳೆಯಾಗಿಯೂ ಮಿಶ್ರಬೆಳೆಯಾಗಿಯೂ ಎತ್ತಬಹುದು. 

ಪರ್ಯಾಯ ಬೆಳೆ: ಈರುಳ್ಳಿಯನ್ನು ನೀರಾವರಿ ಬೆಳೆಯಾಗಿಯೆ ತೆಗೆಯುವುದು ಸಾಮಾನ್ಯ. ಇದನ್ನು ಸಾಮಾನ್ಯವಾಗಿ ತರಕಾರಿಗಳ ಜೊತೆ ಪರಿವರ್ತಿಸುವುದು ರೂಢಿಯಲ್ಲಿದೆ. ಆಲೂಗಡ್ಡೆ, ಮೆಣಸು, ಟೊಮ್ಯಾಟೂ, ಬದನೆ, ಕೂತ್ತಂಬರಿ, ತಿಂಗಳುಹುರುಳಿ, ಸೌತೆ, ಕಡಲೆ, ಬೀಟ್ ರೂಟ್, ಕೋಸು, ಕ್ಯಾರಟ್, ಹೂಕೋಸು ಮುಂತಾದುವನ್ನು ಅನಂತರ ಬೆಳೆಯುತ್ತಾರೆ. ಬೆಳೆ ಪರಿವರ್ತನೆಗೆ ಯಾವುದೇ ನಿರ್ದಿಷ್ಟವಾದ ನಿಯಮವನ್ನು ಅನುಸರಿಸುವುದು ರೂಢಿಯಲ್ಲಿ ಇಲ್ಲ.

ಮಿಶ್ರ ಬೆಳೆ: ಈರುಳ್ಳಿ ಬೀಜದಿಂದ ಬೆಳೆ ತೆಗೆಯುವಾಗ ಮೊಳೆತು ಸುಮಾರಾಗಿ ಬೆಳೆಯುವ ಹೊತ್ತಿಗೆ ಅದರ ಜೊತೆ ಸೊಪ್ಪು ಕೊಯ್ಲಿಗೆ ಬರುತ್ತದೆ. ಬದುಗಳ ಮೇಲೆ ಮೂಲಂಗಿ, ಕೊತ್ತಂಬರಿ, ಬೆಳ್ಳುಳ್ಳಿ, ಹುರುಳಿಕಾಯಿ ಮುಂತಾದವನ್ನು ಮಿಶ್ರ ಬೆಳೆಯಾಗಿ ಬೆಳೆಸುತ್ತಾರೆ.

ವೃದ್ಧಿ: ಈರುಳ್ಳಿಯನ್ನು ಲಿಂಗ (ಬೀಜ) ನಿರ್ಲಿಂಗ (ಲಶುನ) ರೀತಿಗಳಿಂದ ವೃದ್ಧಿ ಮಾಡಬಹುದು. ಲಿಂಗರೀತಿಯಿಂದ ವೃದ್ಧಿ ಮಾಡಿದ ಬೆಳೆ ಇಳುವರಿ ಕೊಡಲು ಸುಮಾರು 5 ತಿಂಗಳು ಬೇಕು. ಬೀಜಗಳಿಂದ ವೃದ್ಧಿಮಾಡುವುದೇ ಹೆಚ್ಚಿನ ಬಳಕೆಯಲ್ಲಿದೆ. ನಿರ್ಲಿಂಗರೀತಿಯಿಂದ ವೃದ್ಧಿ ಮಾಡಿದ ಬೆಳೆ 3 ತಿಂಗಳಿಗೆ ಇಳುವರಿ ಕೊಡುತ್ತದೆ.
ಒಟ್ಲು ಜಾತಿ: ಈರುಳ್ಳಿಯನ್ನು ಬೀಜಗಳಿಂದ ವೃದ್ಧಿ ಮಾಡುವುದರಿಂದ ಒಟ್ಲು ಜಾತಿಯ ಅಗತ್ಯ ಹೆಚ್ಚು. ಒಟ್ಲು ಪಾತಿಯಲ್ಲಿ ಬೆಳೆಸಿ ನಾಟಿ ಮಾಡುವುದಕ್ಕೆ ಹೆಚ್ಚು ಕಾಲ ಮತ್ತು ಶ್ರಮವಾಗುವುದರಿಂದ ಬೀಜವನ್ನು ನೇರವಾಗಿ ತೋಟದಲ್ಲಿ ಚೆಲ್ಲುವುದು ರೂಢಿಯಲ್ಲಿದೆ. ಆದರೆ ಬೀಜವನ್ನು ತೋಟದಲ್ಲಿ ಸರಿಯಾದ ಅಂತರದಲ್ಲಿ ಮೊಳೆಯುವಂತೆ ಚೆಲ್ಲುವುದು ಸಾಧ್ಯವಿಲ್ಲ. ಆದ್ದರಿಂದ ಒಟ್ಲು ಪಾತಿ ಮಾಡುವ ಭೂಮಿಯನ್ನು ಚೆನ್ನಾಗಿ 4-5 ಸಾರಿ ಅಗತೆ ಮಾಡಿ ಧಾರಾಳವಾಗಿ ಗೊಬ್ಬರಹಾಕಿ ಮಟ್ಟಸ ಮಾಡಬೇಕು. 9”ಎತ್ತರ, 3” ಅಗಲ, ಅನುಕೂಲಕ್ಕೆ ತಕ್ಕಹಾಗೆ ಉದ್ದದ ಎತ್ತರಿಸಿದ ಪಾತಿ ಮಾಡಿ ತೆಳುವಾದ ಬೀಜ ಚೆಲ್ಲಿ ಅವುಗಳ ಮೇಲೆ 1” ನಯವಾದ ಮಣ್ಣನ್ನು ಹಾಕಬೇಕು. ಒಟ್ಲು ಪಾತಿಗೆ ಕಾಲಕ್ಕೆ ಸರಿಯಾಗಿ ನೀರು ಹಾಕಿದರೆ ಸುಮಾರು 10 ದಿವಸಗಳಲ್ಲಿ ಬೀಜ ಮೊಳೆಯುತ್ತದೆ. ಬಿತ್ತನೆಯ 1 1/2 ತಿಂಗಳ ತರುವಾಯ ಸಸಿಗಳು ನಾಟಿ ಮಾಡಲು ಸಿದ್ಧವಾಗಿರುತ್ತವೆ. ಒಟ್ಲು ಪಾತಿಯಲ್ಲಿ ಕಾಲಕ್ಕೆ ಸರಿಯಾಗಿ ಕಳೆ ತೆಗೆದರೆ ಸಸಿ ದೃಢವಾಗಿ ಬರುತ್ತದೆ. 8-10 ಕಿ.ಗ್ರಾಂ. ಬೀಜದಲ್ಲಿ ಬೆಳೆಸಿದ ಸಸಿ ಒಂದು ಎಕರೆ ತೋಟಕ್ಕೆ ನಾಟಿ ಮಾಡಬಹುದು. ನೇರವಾಗಿ ತೋಟಕ್ಕೆ ಬೀಜ ಚೆಲ್ಲಿದರೆ ಎಕರೆಗೆ ಸುಮಾರು 20 ಕಿ.ಗ್ರಾಂ. ಬೀಜ ಬೇಕಾಗುತ್ತದೆ. 

	ಈರುಳ್ಳಿ ಬೆಳೆಯುವ ಭೂಮಿಯನ್ನು 3-4 ಸಾರಿ ಚೆನ್ನಾಗಿ ಅಗೆದು ಅಥವಾ ಉಳುಮೆ ಮಾಡಿ, ಕಳೆ, ಕಸ, ಕಡ್ಡಿ ಇತ್ಯಾದಿಗಳನ್ನು ತೆಗೆದು ಶುದ್ಧ ಮಾಡಬೇಕು. ಮೊದಲಸಾರಿ ಅಗೆಯುವಾಗ 1 1/2 ಆಳವಾಗಿ ಅಗೆಯಬೇಕು. ಮುಂದೆ 1 ತಿಂಗಳು ಮಣ್ಣನ್ನು ಬಿಸಿಲಿಗೆ ಒಣಗಲು ಬಿಡಬೇಕು. ಅನಂತರ ಎಕರೆಗೆ 15-20 ಗಾಡಿ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ಎರಡು ಸಾರಿ 9” ಆಳವಾಗಿ ಅಗತೆಮಾಡಿ ಗೊಬ್ಬರವನ್ನು ಮಣ್ಣಿಗೆ ಮಿಶ್ರಮಾಡಿ ನೀರು ಹರಿಯುವಂತೆ ಮಟ್ಟಸ ಮಾಡಬೇಕು. ತರುವಾಯ 6 ( 3 ಗಾತ್ರದ ಪಾತಿ ಮಾಡಿ ನೀರು ಹರಿಯಲು ಮತ್ತು ಬಸಿದು ಹೋಗಲು ತಕ್ಕ ವ್ಯವಸ್ಥೆ ಮಾಡಬೇಕು.

	ಈರುಳ್ಳಿ ಬೇಸಾಯದಲ್ಲಿ ಪಾತಿಗಳ ಅಂತರ ಜಾತಿಯನ್ನು ಅನುಸರಿಸಿದೆ. ಸಸಿಯಾಗಲಿ ಅಶುನವಾಗಲಿ ಸಸಿಯಿಂದ ಸಸಿಗೆ (ಲಶುನದಿಂದ ಲಶುನಕ್ಕೆ) 15 ಸೆಂ.ಮೀ. ಅಂತರವಿರುವಂತೆ ಸಾಲುಗಳಲ್ಲಿ ನೆಡಬೇಕು. ಸಾಲಿನಿಂದ ಸಾಲಿಗೆ 45 ಸೆಂ.ಮೀ. ಅಂತರ ಅಗತ್ಯ. ಬೀಜವನ್ನು ತೋಟಕ್ಕೆ ಬಿತ್ತುವಾಗ ಒಟ್ಲು ಪಾತಿಯಲ್ಲಿ ಅನುಸರಿಸಿದ ವಿಧಾನವನ್ನೇ ಅನುಸರಿಸಬೇಕು.

ಮಧ್ಯವರ್ತಿಯ ಬೇಸಾಯ (ಇಂಟರ್ ಕಲ್ಟಿವೇಷನ್): 2-3 ಸಾರಿ ಕಳೆತೆಗೆದು ಮಣ್ಣನ್ನು ಬೇಸಾಯಮಾಡಿ ಎರಡು ಕಡೆಗಳಿಂದ ಮಣ್ಣನ್ನು ಸಸ್ಯಗಳ ಬುಡಕ್ಕೆ ಏರು ಹಾಕುವುದು ಅಗತ್ಯ. ಬೀಜವನ್ನು ನೇರವಾಗಿ ತೋಟದಲ್ಲಿ ಬಿತ್ತನೆ ಮಾಡಿದ್ದರೆ ಒತ್ತಾಗಿರುವ ಮೊಳಕೆಗಳನ್ನು ಕಿತ್ತು ತೆಳುವಾಗಿರುವ ಸ್ಥಳಗಳಲ್ಲಿ ಬಿತ್ತನೆ ಮಾಡಿದ ನಾಲ್ಕನೆಯ ವಾರದಲ್ಲಿ ನೆಡಬೇಕು. ಮಳೆ ಇಲ್ಲದ ಸಮಯದಲ್ಲಿ ವಾರಕ್ಕೆ ಎರಡು ಸಾರಿ ನೀರಾವರಿ ಮಾಡಬೇಕು. ಬೆಳೆ ಯಾವುದೇ ಹಂತದಲ್ಲಿ ಒಣಗಬಾರದು. ಕಾಲಕ್ಕೆ ಸರಿಯಾಗಿ ಸಸ್ಯ ಸಂರಕ್ಷಣೆ ಮಾಡಬೇಕು. 

ಬೆಳೆಯ ಅವಧಿ ಮತ್ತು ಜಾತಿ ಬೀಜವನ್ನು ಅವಲಂಬಿಸಿದೆ. ಅವಧಿಯ ಪ್ರಕಾರ ಈರುಳ್ಳಿಯಲ್ಲಿ ಮೂರು ಗುಂಪುಗಳಿವೆ. ದೀರ್ಘಾವಧಿ ಬೆಳೆ 90-100 ದಿವಸಗಳದ್ದು, ಹೆಚ್ಚುಬೆಳೆ 130-180 ದಿವಸಗಳದ್ದು, ಮಧ್ಯಾವಧಿ ಬೆಳೆ 100-120 ದಿವಸಗಳದ್ದು, ಲಶುನದಿಂದ ಬಿತ್ತನೆ ಮಾಡಿದರೆ ಸುಮಾರು 90 ದಿವಸಗಳಲ್ಲಿ ಫಸಲು ಸಿಕ್ಕುತ್ತದೆ. ಬೀಜದಿಂದ ಬಿತ್ತನೆ ಮಾಡಿದರೆ 150 ದಿವಸಗಳಲ್ಲಿ ಫಸಲು ಬರುವುದು.

ಕೊಯ್ಲು (ಅಗೆಯುವುದು): ಈರುಳ್ಳಿ ಸಸ್ಯ ಹಸಿರು ಬದಲಾಯಿಸಿ ಮಾಸಲು ಬಣ್ಣಕ್ಕೆ ತಿರುಗಿದಾಗ ಬೆಳೆ ಪರಮಾವಧಿ ಮುಟ್ಟಿದೆ ಎಂದು ತಿಳಿಯಬಹುದು. ಬಲಿತ ತರುವಾಯ ಸಸ್ಯದ ಮೇಲುಭಾಗ ಜೋಲು ಬೀಳುತ್ತದೆ. ಆಗ ದಿಂಡು ಸಮೇತ ಕೈಯಿಂದ ಕಿತ್ತು ಹದಮಾಡಿಕೊಳ್ಳಬಹುದು. ಕೆಲವು ಸಾರಿ ಮೇಲುಭಾಗದ ದಿಂಡನ್ನು ಕೊಯ್ದುಹಾಕಿ ಗುದ್ದಲಿಯಿಂದ 4” ಆಳವಾಗಿ ಕೆದಕಿ ಈರುಳ್ಳಿಯನ್ನು ಆರಿಸಿಕೊಳ್ಳುತ್ತಾರೆ. ಮೇಲುಭಾಗದ ದಿಂಡು, ತಳಭಾಗದ ಕುಚ್ಚು ಬೇರುಗಳನ್ನು ತೆಗೆದುಹಾಕಿ ನೆರಳಿನಲ್ಲಿ ಒಣಗಿಸಿ ಗೆಡ್ಡೆಯನ್ನು ಶೇಖರಿಸುತ್ತಾರೆ.

	ಇಳುವರಿ: ಜಾತಿ, ಕಾಲ, ಮಿಶ್ರ ಬೆಳೆ ಮತ್ತು ಬೇಸಾಯ ಪದ್ಧತಿಯನ್ನು ಅನುಸರಿಸಿ ಇಳುವರಿಯನ್ನು ಪರಿಶೀಲಿಸಬೇಕು. ಎಕರೆಗೆ 5,000-8,000 ಕಿ.ಗ್ರಾಂಗಳ ಇಳುವರಿ ಅಂತರವಿದೆ. ಎಕರೆಗೆ ಸರಾಸರಿ ಇಳುವರಿ 7,000 ಕಿ.ಗ್ರಾಂ.

ಶೇಖರಣೆ: ಈರುಳ್ಳಿ ಒಂದೇ ಸಾರಿಗೆ ಕೊಯ್ಲಿಗೆ ಬರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತದೆ. ಆದ್ದರಿಂದ ಈರುಳ್ಳಿಯನ್ನು ಶೇಖರಿಸುವುದು ಅಗತ್ಯ. ಬಿದಿರುಗಳಿಂದ ಅಟ್ಟ ಕಟ್ಟಿ ಅದರ ಮೇಲೆ ಈರುಳ್ಳಿಯನ್ನು ಹರಡುತ್ತಾರೆ. ಸರಾಗವಾಗಿ ಗಾಳಿಯಾಡುವುದರಿಂದ ಸುಮಾರು 3 ತಿಂಗಳು ಕೆಡದಂತೆ ಶೇಖರಿಸಬಹುದು. ಈರುಳ್ಳಿಯ ಮೇಲ್ಮೈಪೊರೆ ದಪ್ಪವಾಗಿದ್ದರೆ ಹೆಚ್ಚು ದಿವಸ ಇಡಬಹುದು.

ಬೀಜ ಮಾಡುವಿಕೆ: ಬಿತ್ತನೆಗೆ ಮೊದಲೇ ಯೋಜನೆಮಾಡಿ 30 ಸೆಂ.ಮೀ. ಅಂತರ ಕೊಟ್ಟು ನೆಡಬೇಕು. ದಪ್ಪ ಈರುಳ್ಳಿ ಬೀಜದ ದೃಷ್ಟಿಯಿಂದ ಉಪಯೋಗವಿಲ್ಲದ್ದು. 40 ಗ್ರಾಂ. ತೂಕ 7.5 ಸೆಂ.ಮೀ. ಅಗಲದ ಗೆಡ್ಡೆಗಳು ಬೀಜದ ಬೆಳೆಗೆ ಯೋಗ್ಯವಾದುವು. ಸುಷುಪ್ತಾವಸ್ಥೆಯಲ್ಲಿರುವ ಈರುಳ್ಳಿ ಬೀಜದ ಬೆಳೆಗೆ ಯೋಗ್ಯವಲ್ಲ. ಈರುಳ್ಳಿ ಸಸ್ಯ ನೆಟ್ಟ 3 ತಿಂಗಳಿಗೆ ಹೂ ಬಿಡುತ್ತದೆ. ಹೂ ಬಿಟ್ಟು 1 1/2 ತಿಂಗಳಿಗೆ ಬಲಿಯಲು ಪ್ರಾರಂಭಿಸುತ್ತದೆ. ಎಲ್ಲ ಸಸ್ಯಗಳಲ್ಲಿ ಬೀಜ ಒಂದೇ ಸಾರಿ ಬಲಿಯುವುದಿಲ್ಲ. 3-4 ಹಂತಗಳಲ್ಲಿ ಇದು ನಡೆಯುವುದು. ಬೀಜ ಬಲಿಯುವುದಕ್ಕೆ ಮೊದಲು ಗೊಂಚಲನ್ನು ಕೊಯ್ದು ಬೀಜ ಮಾಡಿದರೆ ಬೀಜ ಮೊಳೆಯುವ ಸೇಕಡ ಅಂಶ ಕಡಿಮೆಯಾಗಿ ಇಳುವರಿ ತೀರ ಕಡಿಮೆಯಾಗುತ್ತದೆ. ಬಲಿತಿರುವ ಗೊಂಚಲು ಕ್ಯಾಪ್‍ಸುಲ್‍ಗಳ ಮೇಲುಕವಚ ಒಡೆದು ಕಪ್ಪಗಿರುವ ಬೀಜ ಕಾಣುತ್ತದೆ. ಬಲಿತಿರುವ ಬೀಜಗಳ ಕೋನಗಳು (ಆಂಗಲ್ಸ್) ಸ್ಪಷ್ಟವಾಗಿರುತ್ತವೆ. ಬಲಿತ ಗೊಂಚಲುಗಳನ್ನು ಕೊಯ್ದು ಒಣಗಿಸಬೇಕು. ಒಣಗಿದ ಗೊಂಚಲುಗಳನ್ನು ಕೈಯಿಂದ ಉಜ್ಜಿ ಬೀಜ ಮಾಡಬೇಕು. ಬೀಜವನ್ನು ನೀರಿನ ಪಾತ್ರೆಯಲ್ಲಿ ಹಾಕಿ ತೇಲುವ ಬೀಜಗಳನ್ನು ನೆರಳಿನಲ್ಲಿ ಒಣಗಿಸಿ ಸೆರೆಸಾನ್ ಪುಡಿಯನ್ನು ಮಿಶ್ರಮಾಡಿ ಡಬ್ಬಗಳಲ್ಲಿ ಶೇಖರಿಸಬೇಕು. ಬೀಜಗಳನ್ನು 1 ವರ್ಷಕ್ಕಿಂತ ಹೆಚ್ಚುಕಾಲ ಶೇಖರಿಸಲು ಸಾಧ್ಯವಿಲ್ಲ. ಒಂದು ಗೊಂಚಲಿನಲ್ಲಿ ಸುಮಾರು 225-500 ಬೀಜಗಳವರೆಗೆ ಇರುತ್ತವೆ. ಒಂದು ಪೌಂಡಿನಲ್ಲಿ ಸುಮಾರು 1,12,900 ಬೀಜಗಳು ಇರಬಹುದು. ಎಕರೆಗೆ 3,000-5,000 ಕಿ.ಗ್ರಾಂ. ಈರುಳ್ಳಿಬೀಜ ಸಿಕ್ಕುತ್ತವೆ. 
ಕೀಟಗಳು: ಥ್ರೀಪ್ಸ್ ಎಂಬ ಕೀಟಗಳು ಗುಂಪುಗಳಾಗಿ ಕೊಳವೆ ಎಲೆಗಳ ಮೇಲೆ ಇದ್ದು ಸಸ್ಯರಸವನ್ನು ಹೀರುತ್ತವೆ. ಹೀರಿದ ಭಾಗಗಳು ಬಿಳುಪಾಗಿ ಕಾಣುತ್ತವೆ. 0.05 ಬಿ.ಎಚ್.ಸಿ. ಪುಡಿ ಅಥವಾ ಹೊಗೆಸೊಪ್ಪಿನ ಕಷಾಯ ಸಿಂಪಡಿಸುವುದರಿಂದ ಇದನ್ನು ತಡೆಯಬಹುದು.
 
ರೋಗಗಳು: ಡೌನಿ ಮಿಲ್‍ಡ್ಯೂ ಈರುಳ್ಳಿಗೆ ತಂಪಾದ ಹವಾಗುಣದಲ್ಲಿ ಮಿಲ್‍ಡ್ಯೂ ರೋಗ ಬರುತ್ತದೆ. ಕೊಳವೆ ಎಲೆಗೆ ರೋಗ ಬಂದಾಗ ಮುರಿದು ಜೋಲು ಬೀಳುತ್ತವೆ. ಬೊರ್ಡೋ ದ್ರಾವಣವನ್ನು ಈ ರೋಗವನ್ನು ತಡೆಯಬಹುದು. 

ಸ್ಮಟ್ಸ್ : ಈರುಳ್ಳಿಯ ಮೇಲು ಭಾಗದ ಕಂಠ ಕೊಳೆಯುತ್ತದೆ. ಇದು ಬೀಜಗಳಿಂದ ಹರಡುವ ರೋಗ ಬೀಜಕ್ಕೆ ಅರಸಾನ್ ಅಥವಾ ತೆರಸಾನ್ ಚಿಕಿತ್ಸೆ ಮಾಡುವುದರಿಂದ ಈ ರೋಗವನ್ನು ತಡೆಯಬಹುದು. 

ವರ್ಗೀಕರಣ: ಈರುಳ್ಳಿಯನ್ನು 5 ಗುಂಪುಗಳಾಗಿ ವಿಂಗಡಿಸಬಹುದು. 1. ಲಶುನ ಈರುಳ್ಳಿ; 2. ಗುಂಪು ಈರುಳ್ಳಿ 3. ಹುಲ್ಲು ಈರುಳ್ಳಿ; ಜಪಾನ್ ಈರುಳ್ಳಿ; 4. ಸೀಮೆ ಈರುಳ್ಳಿ; 5. ದೀರ್ಘಕಾಲ ಈರುಳ್ಳಿ (ಮರದ ಈರುಳ್ಳಿ).

ಲಶುನ ಈರುಳ್ಳಿ : ಇದು ಹೆಚ್ಚಿನ ಬಳಕೆ ಹಾಗೂ ಬೇಸಾಯದಲ್ಲಿ ಇದೆ. ಉಪಯೋಗದಲ್ಲಿರುವ ಈರುಳ್ಳಿಯನ್ನು ಇದರ ಪಾಲು 80 % - 90 %. ಈ ಜಾತಿಯ ಸಸ್ಯದಲ್ಲಿ ಒಂದು ದಪ್ಪ ಲಶುನ (ಗೆಡ್ಡೆ) ಮಾತ್ರ ಸಿಕ್ಕುತ್ತದೆ. ಸಾಮಾನ್ಯವಾಗಿ ಬೀಜಗಳಿಂದ ಕೆಲವೊಮ್ಮೆ ಲಶುನಗಳಿಂದ ಇದರ ವೃದ್ಧಿ ಸಾಧ್ಯ. ಲಾಭದಾಯಕವಲ್ಲ. 
ಗುಂಪು ಈರುಳ್ಳಿ: ಸಣ್ಣ ಸಣ್ಣ ಲಶುನದ ಸಣ್ಣ ಸಣ್ಣ ಇಲಗು ತಳಭಾಗz ಕಾಂಡ ಪಕ್ಕ ವೊಸುಗಳನ್ನು ಬಿಟ್ಟು ಲಶುನವಾಗಿ ಗುಂಪಾಗಿರುವುದರಿಂದ ಗುಂಪು ಈರುಳ್ಳಿ ಎಂದು ಹೆಸರು. ಸಣ್ಣ ಇಲಗುಗಳನ್ನು ಗುಂಪಿನಿಂದ ಬೇರ್ಪಡಿಸಿ ನೆಟ್ಟರೆ ಮತ್ತೆ ಗುಂಪಾದ ಈರುಳ್ಳಿಯನ್ನು ಪಡೆಯಬಹುದು. ಬೀಜಗಳಿಂದ ವೃದ್ಧಿ ಮಾಡುವ ಸಾಧ್ಯತೆ ಇದ್ದರೂ ಹೆಚ್ಚು ಕಾಲ ಹಿಡಿಯುವುದರಿಂದ ಇಲಗನ್ನು ನೆಡುವ ರೂಢಿಯೇ ಹೆಚ್ಚು. ಕಡಿಮೆ ಇಳುವರಿ ಕೊಡುವುದರಿಂದ ಇದರ ಬೆಳೆ ಹೆಚ್ಚು ಬಳಕೆಯಲ್ಲಿಲ್ಲ. 
ಜಪಾನ್ ಈರುಳ್ಳಿ : ದಿಂಡು ಮತ್ತು ಈರುಳ್ಳಿ ಗಾತ್ತದಲ್ಲಿ ಒಂದೇ ಸಮನಾಗಿರುತ್ತವೆ. ಆದ್ದರಿಂದ ದಿಂಡನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಇವು ಗುಂಪು ಈರುಳ್ಳಿಯಂತೆ ಗುಂಪಾಗಿ ಬೆಳೆಯುತ್ತವೆ. ಈರುಳ್ಳಿಯಂತೆ ದಿಂಡು ಹೆಚ್ಚು ದಿವಸ ಉಳಿಸಲು ಸಾಧ್ಯವಾಗದೆ ಇರುವುದರಿಂದ ಇದರ ಪ್ರಾಮುಖ್ಯ ಹಾಗೂ ಬೇಸಾಯ ತೀರ ಕಡಿಮೆ. ಜಪಾನ್ ಗುಂಪು ಈರುಳ್ಳಿಯನ್ನು ಬೀಜ ಮತ್ತು ಲಶುನಗಳಿಂದ ವೃದ್ಧಿ ಮಾಡಬಹುದು. ಭಾರತ ದೇಶದಲ್ಲಿ ಇದು ಹೆಚ್ಚಿನ ಬೇಸಾಯದಲ್ಲಿ ಇಲ್ಲ. ಇದಕ್ಕೆ ಕೀಟ ಮತ್ತು ರೋಗ ಬಾಧೆ ಇಲ್ಲ.

ಸೀಮೆ ಈರುಳ್ಳಿ : ಸೀಮೆ ಈರುಳ್ಳಿಯನ್ನು ಅನೇಕ ಸಾರಿ ಜಪಾನ್ ಈರುಳ್ಳಿಯೆಂದು ಭ್ರಮಿಸುವ ಸಾಧ್ಯತೆ ಹೆಚ್ಚು. ಇದು ಕೂಡ ಗುಂಪಾಗಿ ಬೆಳೆಯುತ್ತದೆ. ಆದರೆ ಇದು ದೀರ್ಘಾವಧಿ ಬೆಳೆ. ಗುಂಪಾಗಿ ಬೆಳೆಯುವುದರಿಂದ ಹೆಚ್ಚಿನ ಅಂತರ ಕೊಡಬೇಕು. ಸೀಮೆ ಈರುಳ್ಳಿಯನ್ನು ಬೀಜ ಮತ್ತು ಲಶುನಗಳಿಂದ ವೃದ್ಧಿ ಮಾಡಬಹುದು. ಇತರ ಗುಣಗಳಲ್ಲಿ ಇದು ಬೆಳ್ಳುಳ್ಳಿಯನ್ನು ಹೋಲುತ್ತಾದರೂ ಬೆಳ್ಳುಳ್ಳಿಯಷ್ಟು ಘಾಟು ಅಲ್ಲ.

ದೀರ್ಘಕಾಲ ಈರುಳ್ಳಿ (ಮರದ ಈರುಳ್ಳಿ) : ಭಾರತ ದೇಶದಲ್ಲಿ ಮರದ ಈರುಳ್ಳಿ ಹೆಚ್ಚಿನ ಪ್ರಾಮುಖ್ಯ ಪಡೆದಿಲ್ಲ. ದೀರ್ಘಾವಧಿ ಮರದ ಕೆಳ ಮತ್ತು ಮೇಲು ಭಾಗದಲ್ಲಿ ಈರುಳ್ಳಿ ಗುಂಪುಗಳು ಬಿಡುತ್ತವೆ. ಮೇಲುಭಾಗದ ಗುಂಪಿನಲ್ಲಿ ಚಿಕ್ಕ ಲಶುನಗಳಿವೆ. ಇವನ್ನು ಗುಂಪಿನಿಂದ ಬೇರ್ಪಡಿಸಿ ವೃದ್ಧಿಮಾಡಬಹುದು. ಈ ಗುಂಪಿನ ಈರುಳ್ಳಿಯನ್ನು ಉಪ್ಪಿನಕಾಯಿಗಾಗಿ ಹೆಚ್ಚಾಗಿ ಬಳಸುತ್ತಾರೆ.

	ಈ ಕೆಳಗಿನ ಗುಣಗಳನ್ನು ಅನುಸರಿಸಿ ಜಾತಿ ವಿಂಗಡಣೆ ಮಾಡುತ್ತಾರೆ. ಬಣ್ಣ, ಆಕಾರ, ಗಾತ್ರ, ವೃತ್ತ ಎಲೆಯ ಬಣ್ಣ, ಉಳಿಯುವ ಗುಣ (ಕೀಪಿಂಗ್ ಕ್ವಾಲಿಟಿ). ಬೆಳೆಯ ಅವಧಿ ಮತ್ತು ಇಳುವರಿ, ವಾಸನೆ ಮತ್ತು ಆಕಾರ.
ಬಣ್ಣ: ಕೆಂಪು, ಬಿಳಿ, ಹಳದಿ ಮತ್ತು ಮಧ್ಯವರ್ತಿ. ಆಕಾರ ಗುಂಡು ಬುಗುರಿ, ಆಯತಾಕಾರ ಮತ್ತು ಚಪ್ಪಟೆ ತಳ. ಗಾತ್ರ: ಸಣ್ಣ (1”-2”) ಮಧ್ಯಮ (2”-3”) ದೊಡ್ಡ (3” ಮತ್ತು ಹೆಚ್ಚು). ವೃತ್ತ ಎಲೆಯ ಬಣ್ಣ; ಬಿಳುಪು ಮತ್ತು ಇತರವು. ಉಳಿಯುವ ಗುಣ: ಕಡಿಮೆ ದಿನ ಉಳಿಯುವ ಗುಣ : ಹೆಚ್ಚು ದಿನ ಉಳಿಯುವ ಗುಣ ಮಧ್ಯಮ. ಬೆಳೆ ಅವಧಿ: ಶೀಘ್ರಾವಧಿ 90-100 ದಿವಸ; ನಿಧಾನ ಅವಧಿ 130-180 ದಿವಸ. ಮಧ್ಯಮ ಅವಧಿ 100-120 ದಿವಸ. ವಾಸನೆ ಮತ್ತು ಕಾರ: ಸ್ವಲ್ಪ ಮತ್ತು ಹೆಚ್ಚು ಇರುವಂಥವು.

ಈರುಳ್ಳಿ ಜಾತಿಗಳಲ್ಲಿ ಮುಖ್ಯವಾದವು ಗೆಡ್ಡೆ ಈರುಳ್ಳಿ (ಬಲ್ಬ್ ಅನಿಯನ್) ಆಲು ಈರುಳ್ಳಿ (ಮಲ್ಟಿಪ್ಲೈಯರ್ ಅಥವಾ ಪೊಟ್ಯಾಟು), ಷಲಾಟ್, ಸಿಬಾಲ್ ಅಥವಾ ಜಪಾನ್ ಈರುಳ್ಳಿ. ವ್ಯಾಪಾರದೃಷ್ಟಿಯಿಂದ ಗೆಡ್ಡೆ ಈರುಳ್ಳಿ ಮುಖ್ಯವಾದದ್ದು. ಆಲು ಈರುಳ್ಳಿಯಲ್ಲಿ ಒಂದೇ ಗಿಡದಲ್ಲಿ ಸಣ್ಣ ಸಣ್ಣ ಈರುಳ್ಳಿಗಳು ಉದ್ಭವಿಸುತ್ತದೆ. ಹೊರಭಾಗ ಬಿಳುಪು. ಕಡಿಮೆ ಉಷ್ಣವನ್ನು ತಡೆಯುವ ಶಕ್ತಿಯಿದೆ. ಷಲಟ್ ಜಾತಿಗೂ ಆಲು ಈರುಳ್ಳಿಯಂತೆಯೇ ವಾಸನೆ ಹೆಚ್ಚು. ಜಪಾನ್ ಈರುಳ್ಳಿಯನ್ನು ಬೀಜಗಳಿಂದ ಉತ್ಪಾದಿಸಬಹುದು. ಇದರಲ್ಲಿ ಗೆಡ್ಡೆಗಳಿರುವುದಿಲ್ಲ. ಆದರೆ ಕಾಂಡ ಭಾಗವನ್ನು ಗೆಡ್ಡೆಯಂತೆ ಉಪಯೋಗಿಸಬಹುದು. ಭಾರತದಲ್ಲಿ ಇದರ ಬೇಸಾಯವಿಲ್ಲ. ಈ ಜಾತಿಯ ಕಾಂಡ ಭಾಗ ಬಲುಗಟ್ಟಿಯಾಗಿದ್ದು ರೋಗಗಳನ್ನು ತಡೆಯಬಲ್ಲ ಶಕ್ತಿ ಇದಕ್ಕಿದೆ. 
ಆಕಾರ, ಬಣ್ಣ, ರುಚಿ ಇವನ್ನು ಅನುಸರಿಸಿ ವ್ಯಾಪಾರದೃಷ್ಟಿಯಿಂದ ಈರುಳ್ಳಿಯನ್ನು ಬೇರೆ ಬೇರೆ ಜಾತಿಗಳಾಗಿ ವಿಭಾಗಿಸಿರುವರು. ಅವುಗಳ ವಿವರ ಹೀಗಿದೆ: 

ಬಳ್ಳಾರಿ ಈರುಳ್ಳಿ: ಬಣ್ಣ ಮಾಂಸದಂತೆ, ಆಕಾರ ದುಂಡು ಅಥವಾ ಮೊಟ್ಟೆಯಂತೆ 3”-4” ಉದ್ದ. ಹೆಚ್ಚು ಕಾಲ ಉಳಿಯುತ್ತದೆ. ಕಾರ ಕಡಿಮೆ. ಅಧಿಕ ಇಳುವರಿ ಕೊಡುತ್ತದೆ. ಗೆಡ್ಡೆ ಮೆದು. ಕೆಂಪು ಮತ್ತು ಕಪ್ಪು ಮಣ್ಣಿಗೆ ಹೊಂದಿಕೊಳ್ಳುತ್ತದೆ. ರಾಂಪುರ ಈರುಳ್ಳಿ ಎಂದೂ ಹೆಸರಿದೆ.

ಬೊಂಬಾಯಿ ಈರುಳ್ಳಿ ಅಥವಾ ದುಲಿಯಾ: ಹೊರ ಮೈ ಬಣ್ಣ ಬೆಳ್ಳಿಯಂತೆ. ಆಕಾರ ದುಂಡಗೆ, ಗಾತ್ರ ಮಧ್ಯಮ ಮತ್ತು ದೊಡ್ಡದು. ಹೆಚ್ಚು ಕಾಲ ಉಳಿಯುತ್ತದೆ. ಕಾರ ಕಡಿಮೆ. ಅಧಿಕ ಇಳುವರಿ ಕೊಡುತ್ತದೆ. ಕಪ್ಪು ಮಣ್ಣಿಗೆ ಹೊಂದಿಕೊಳ್ಳುತ್ತದೆ. ಗೆಡ್ಡೆ ಗಟ್ಟಿ ಮತ್ತು ಬಿಗಿ. ದುಲಿಯಾ ಜಾತಿ ದಾವಣಗೆರೆ ಪ್ರದೇಶದಲ್ಲಿ ಬೆಳೆಯುವುದರಿಂದ ದಾವಣಗೆರೆ ಈರುಳ್ಳಿ ಎಂದೂ ಹೆಸರಿದೆ. ಪಾಟ್ನ ಜಾತಿ ಎಂದೂ ಕರೆಯುವುದಿದೆ.

ಬೆಂಗಳೂರು ಈರುಳ್ಳಿ : ಬಣ್ಣ ಸಾಮಾನ್ಯವಾಗಿ ಕೆಂಪು. ಬೆಳ್ಳಗೂ ಇದೆ. ಆಕಾರ ದುಂಡಗೆ, ವಾಸನೆ ತೀಕ್ಷ್ಣ. ಹೆಚ್ಚುಕಾಲ ಶೇಖರಿಸಬಹುದು. ಔಷಧಿಗೆ ಇದರ ಉಪಯೋಗ ಹೆಚ್ಚು. ಕೋಲಾರ ಮತ್ತು ಬೆಂಗಳೂರು ಜಿಲ್ಲೆಯಲ್ಲಿ ಬೆಳೆ ಹುಲುಸಾಗಿ ಎತ್ತುತ್ತಾರೆ.

ಸಣ್ಣ ಜಾತಿಯ ಈರುಳ್ಳಿ: ಇದರಲ್ಲಿ ಮುಖ್ಯವಾಗಿ ಎರಡು ಬಗೆಗಳಿವೆ. ಇನ್ನೊಂದು ದುಂಡಗಿದೆ. ಹಳ್ಳಿ ಜನರು ಹೆಚ್ಚಾಗಿ ಇದನ್ನೇ ಉಪಯೋಗಿಸುತ್ತಾರೆ.

ಈ ಮೇಲೆ ಕಾಣಿಸಿರುವ ನಾಲ್ಕು ಜಾತಿಗಳು ಮೈಸೂರು ರಾಜ್ಯದಲ್ಲಿ ಹೆಚ್ಚಿನ ಬೇಸಾಯದಲ್ಲಿವೆ. ಇನ್ನೂ ಅನೇಕ ಜಾತಿಗಳು ಇವೆಯಾದರೂ ಅವುಗಳ ಬೇಸಾಯ ಮೈಸೂರು ರಾಜ್ಯದಲ್ಲಿ ತೀರ ಕಡಿಮೆ.			(ಎಂ.ಎಚ್.ಎಂ.; ಎ.ಎನ್.ಎಸ್.)

	ಕೆಲವರು ತಾಮಸಾಹಾರವೆಂದು ಈರುಳ್ಳಿಯನ್ನು ತ್ಯಾಜ್ಯ ಮಾಡಿದ್ದರೂ ಇದು ಬಹುಜನರ ದಿನನಿತ್ಯದ ಮೇಲೋಗರದ ವಸ್ತುವಾಗಿದೆ. ದಕ್ಷಿಣ ಭಾರತದ ಕೆಲವು ಭಾಗಗಳನ್ನು ಬಿಟ್ಟರೆ ಪ್ರಪಂಚದ ಎಲ್ಲೆಡೆಗಳಲ್ಲೂ ಇದರ ಬಳಕೆಯನ್ನು ಕಾಣಬಹುದು. ಸಾರು, ಸಾಂಬಾರ್, ಚಟ್ನಿ, ಗೊಜ್ಜು, ಪಲ್ಯ, ಚಿತ್ರಾನ್ನ, ಪಲಾವ್‍ಗಳಲ್ಲೂ ವಡೆ ಪಕೋಡಗಳಲ್ಲೂ ಇದನ್ನು ಬಳಸುತ್ತಾರೆ. ಹಸಿಯಾಗಿಯೇ ಮೆಲ್ಲುವುದುಂಟು. ಹೀಗಾಗಿ ಇದು ಬಡವರ ಆಧಾರಿ ಎನಿಸಿದೆ. ಮೇಲಾಗಿ ಇದು ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನೊದಗಿಸುತ್ತದೆ. ಕಣ್ಣಿನ ರೋಗಗಳಿಗೆ ಇದರ ರಸವನ್ನು ಬಳಸುತ್ತಾರೆ. ಅಜೀರ್ಣಕ್ಕೆ ಇದು ಒಳ್ಳೆಯ ಮದ್ದು. ಸುಟ್ಟು ತಿಂದಲ್ಲಿ ಉಷ್ಣವನ್ನು ನಿವಾರಿಸಿ ಮೃದುರೇಚನ ಮಾಡಿಸುತ್ತದೆ. ಬೆಲ್ಲದೊಂದಿಗೆ ಇದರ ಲೇಹ್ಯವನ್ನು ಮಾಡಿ ಉಪಯೋಗಿಸುತ್ತಾರೆ. ಔಷಧಿಗೆ ಬಿಳಿಯ ಗೆಡ್ಡೆಗಳೇ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಗೆಡ್ಡೆಯಂತೆ ಈರುಳ್ಳಿಯ ಕಾವನ್ನೂ ಆಹಾರ ಪದಾರ್ಥವಾಗಿ ಉಪಯೋಗಿಸುವ ವಾಡಿಕೆಯಿದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ